ಮಹಾ ಮಹಿಮ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ನಗರದಲ್ಲಿ ಸುಮಾರು ಹದಿನೈದು ದಿನಗಳ ಮೊದಲಿನಿಂದಲೇ ಸಿದ್ದತೆಗಳು ಆರಂಭವಾಗುತ್ತವೆ. ಗವಿಮಠ ಸೇರಿದಂತೆ ನಗರದ ಮನೆಗಳು, ಕಟ್ಟಡಗಳು, ಸುಣ್ಣ ಬಣ್ಣಗಳಿಂದ ಅಲಂಕೃತಗೊಳ್ಳುತ್ತವೆ. ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವದ ದಿನದಂದು ಕೊಪ್ಪಳ ಜಿಲ್ಲೆ ಸೇರಿದಂತೆ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಗವಿಸಿದ್ದೇಶ್ವರರಿಗೆ ಕಾಯಿ-ಕರ್ಪೂರಗಳೊಂದಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.
ಸಂಜೆಯ ವೇಳೆಗೆ ಜರುಗುವ ರಥೋತ್ಸವಕ್ಕೆ ನಗರದ ಸಮೀಪದ ಊರುಗಳ ಭಕ್ತರು ಎತ್ತಿನ ಬಂಡಿ, ಟ್ರ್ಯಾಕ್ಟರ್, ಲಾರಿ, ಕಾರು, ಟಂಟಂ, ಟೆಂಪೋಗಳಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುವ ದೃಶ್ಯ ಬೆಳಿಗ್ಗೆಂದಲೇ ಕಾಣಸಿಗುತ್ತದೆ. ಸಮೀಪದ ಹಳ್ಳಿಗರು ಎತ್ತಿನ ಬಂಡಿಗಳಲ್ಲಿ ಘಲ್-ಘಲ್ ಅಂತ ಜಾತ್ರೆಗೆ ಆಗಮಿಸುವ ಈ ಜಾನಪದ ದೃಶ್ಯ ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ. ಅಂದಿನ ದಿನ ಮಾತ್ರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸದ್ದಿಗಿಂತ ಹೆಚ್ಚಾಗಿ, ಎತ್ತಿನ ಕೊರಳ ಘಂಟೆ-ಗೆಜ್ಜೆಗಳ ಘಲ್ ಘಲ್ ನಿನಾದವೇ ಹೆಚ್ಚು ಕೇಳಿಸುತ್ತದೆ.
ತಮ್ಮ ದೈನಂದಿನ ಜಂಜಾಟದಲ್ಲಿ ಹೈರಾಣಾದ ಭಕ್ತರು ಜಾತ್ರೆಯ ದಿನ ಮುಂಜಾನೆ ಬಂಡಿ ಹೂಡಿಕೊಂಡು ಸೂರ್ಯ ನೆತ್ತಿ ಮೇಲೆ ಬರುವುದರೊಳಗೆ ಜಾತ್ರೆ ಸೇರಿ, ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಕಾಯಿ, ಕರ್ಪೂರದೊಂದಿಗೆ ಭಕ್ತಿ ಸಲ್ಲಿಸಿದ ತರುವಾಯವೇ ಅವರ ಮನಸ್ಸಿಗೆ ನೆಮ್ಮದಿ.
ಆಧುನಿಕ ಕಾಲದ ಈ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಆದರೆ ಈ ಜಾತ್ರೆಯ ಅಂಗವಾಗಿ ಕುಸ್ತಿ ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲಾಗುತ್ತದೆ.
ಸಂಜೆಯ ವೇಳೆಗೆ ಆರಂಭಗೊಳ್ಳುವ ರಥೋತ್ಸವದ ಸಂದರ್ಭದಲ್ಲಿ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಳ್ಳುವುದು ಶತಮಾನಗಳಿಂದ ಇಲ್ಲಿ ರೂಢಿಯಲ್ಲಿದೆ. ಈ ಜಾತ್ರೆಯ ಇನ್ನೊಂದು ವಿಶೇಷವೆಂದರೆ, ಸಾಮಾನ್ಯವಾಗಿ ಎಲ್ಲಾ ರಥೋತ್ಸವಗಳಲ್ಲಿ ಭಕ್ತರು ಬಾಳೆಹಣ್ಣು ಹಾಗೂ ಇತರೆ ಹಣ್ಣುಗಳನ್ನು ತೇರಿನತ್ತ ಎಸೆದು ಭಕ್ತಿ ಸಲ್ಲಿಸಿದರೆ, ಗವಿಸಿದ್ದೇಶ್ವರ ರಥೋತ್ಸವದಲ್ಲಿ ಮಾತ್ರ ಭಕ್ತರು ಬಾಳೆಹಣ್ಣಿನ ಜೊತೆಗೆ ಉತ್ತತ್ತಿಗಳನ್ನು ತೇರಿನತ್ತ ಎಸೆದು ಭಕ್ತಿ ಅರ್ಪಿಸುವುದು ವಾಡಿಕೆ. ರಥೋತ್ಸವದ ಬಗ್ಗೆ ಯಾವ ಹೆಚ್ಚಿನ ಪ್ರಚಾರವೂ ಇಲ್ಲದೆ ಲಕ್ಷಾಂತರ ಭಕ್ತರು, ಜಾತ್ರೆಯ ಈ ಒಂದು ಸಂದರ್ಭದಲ್ಲಿ ಒಂದೆಡೆ ಸೇರುವುದೆಂದರೆ ಸೋಜಿಗವೇ ಸರಿ.
ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಪ್ರತಿ ವರ್ಷವೂ ವೃದ್ಧಿಸುತ್ತಿದ್ದು, ಈ ಜಾತ್ರೆ ಹಿಂದೂ, ಮುಸ್ಲಿಂ, ಕ್ರೈಸ್ತರು ಮುಂತಾದ ಜಾತಿ-ಮತಗಳ ಭೇದ ಭಾವವಿಲ್ಲದೆ, ಗವಿಸಿದ್ದರ ತತ್ವದಲ್ಲಿ ಮಿಳಿತವಾಗಿ ಭಾವೈಕ್ಯತೆಯನ್ನು ಬೆಸೆಯುವ ಕೋಮು ಸಾಮರಸ್ಯದ ಪ್ರತೀಕವೂ ಇದಾಗಿದೆ.
ಗವಿಮಠ ಆವರಣದ ಬೃಹತ್ ಮೈದಾನದಲ್ಲಿ ಜಾತ್ರೆಯ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಹಲವು ಬಗೆಯ ಅಂಗಡಿ, ಮಳಿಗೆಗಳು, ಹೋಟೆಲುಗಳು ಬಿಡಾರ ಹೂಡುತ್ತವೆ. ಸೂಜಿಯಂತಹ ಸಣ್ಣ ವಸ್ತುವಿನಿಂದ ಮೊದಲುಗೊಂಡು ಒಂದು ಕುಟುಂಬದ ಅಗತ್ಯ ಸಾಮಗ್ರಿಗಳೆಲ್ಲವೂ ಈ ಜಾತ್ರೆಯಲ್ಲಿ ಲಭ್ಯ. ಹಲವು ಬಗೆಯ ಮಕ್ಕಳ ಎಲೆಕ್ಟ್ರಾನಿಕ್ ಆಟಿಕೆಗಳು, ತರುಣಿಯರ ಹೆಗಲನ್ನೇರುವ ಜಂಭದ ಚೀಲಗಳು (ವ್ಯಾನಿಟಿ ಬ್ಯಾಗ್) ಸುಶ್ರಾವ್ಯ ಹಾಗೂ ಕರ್ಕಶ ಶಬ್ದವನ್ನೂ ಹೊರಡಿಸುವ ವೈವಿಧ್ಯಮಯ ವಾದ್ಯಗಳು, ಕ್ಷಣಾರ್ದದಲ್ಲೇ ಅಗಾಧವಾದುದನ್ನು ಕಲಿಸುವ ಅಂಗಡಿಗಳು, ಬಗೆ ಬಗೆಯ ಬಣ್ಣದ ಬಳೆಗಳ ನೂರಾರು ಅಂಗಡಿಗಳು, ಅಲಂಕಾರಿಕ ವಸ್ತ್ರಾಭರಣದ ಅಂಗಡಿಗಳು, ಗೃಹಾಲಂಕಾರ ಮತ್ತು ಗೃಹೋಪಯೋಗಿ ಬಳಕೆಯ ನವ ನವೀನತೆಯ ವಸ್ತುಗಳು, ಎತ್ತಿನ ಕೊರಳಿಗೆ ಕಟ್ಟುವ ಘಂಟೆ, ಗೊರಸುಗಳೂ ಸೇರಿದಂತೆ ಬೇಸಾಯದ ವಿವಿಧ ಬಗೆಯ ಸಾಮಗ್ರಿಗಳೂ ಗವಿಮಠದ ಮೈದಾನವನ್ನು ಆವರಿಸಿರುತ್ತವೆ. ಮಕ್ಕಳು ಬಗೆ ಬಗೆಯ ಆಟಿಕೆ ಸಾಮಾನುಗಳನ್ನು ಕೊಡಿಸುವಂತೆ ತಮ್ಮ ಪಾಲಕರಿಗೆ ದುಂಬಾಲು ಬಿದ್ದು, ಪೀಡಿಸುವ ದೃಶ್ಯ ಜಾತ್ರೆಯ ಆವರಣದಲ್ಲಿ ಸರ್ವೆ ಸಾಮಾನ್ಯ. ಆಟಿಕೆ ವಸ್ತುಗಳನ್ನು ಖರೀದಿಸಿ, ಪಕ್ಕದಲ್ಲೇ ಸಿಗುವ ಗೋಬಿ ಮಂಚೂರಿ ಸವಿದು, ತಿರುಗು ರಾಟೆಯಲ್ಲಿ ತಿರುಗಿ, ಮಕ್ಕಳ ಉಗಿಬಂಡಿಯಲ್ಲಿ ಕುಳಿತು ಒಂದಷ್ಟು ಮಜಾ ಅನುಭವಿಸಿದರಷ್ಟೆ ಜಾತ್ರೆಯ ಸಂಭ್ರಮ ಅನುಭವಿಸಿದಂತೆ. ಇಲ್ಲದಿದ್ದಲ್ಲಿ ಜಾತ್ರೆ ಅಪೂರ್ಣವೆನಿಸುತ್ತದೆ.
ಈ ಜಾತ್ರೆಯಲ್ಲಿ ಎಲ್ಲಾ ಖರೀದಿ ಮುಗಿದ ನಂತರ ಮಂಡಾಳು- ಮಿರ್ಚಿ ತಿನ್ನದೇ ಇದ್ದರೆ ಜಾತ್ರೆಯೇ ಅಪೂರ್ಣ ಎಂದು ಇಲ್ಲಿಗೆ ಬರುವವರು ಭಾವಿಸುತ್ತಾರೆ. ಹೀಗೆ ನಾಲಿಗೆಗೆ ಖಾರ ಉಣಿಸುವ ಮಿರ್ಚಿ-ಮಂಡಕ್ಕಿ ತಿಂದು, ಅಲ್ಲಿಯೇ ಬಿಡಾರ ಹೂಡಿರುವ ಅಂಗಡಿಗಳಲ್ಲಿ ಗ್ಲಾಸಿನ ತುಂಬ ಕಬ್ಬಿನ ಹಾಲು ಕುಡಿದು ಹೊಟ್ಟೆ ತಣ್ಣಗಾದ ನಂತರವೇ ಜಾತ್ರೆ ಪೂರ್ಣಗೊಂಡಂತೆ.
ಸುಮಾರು ೧೫ ರಿಂದ ೨೦ ದಿನಗಳ ಕಾಲ ನಡೆಯುವ ಈ ಜಾತ್ರೆಯ ಪ್ರತಿದಿನವೂ ಒಂದು ವಿಶೇಷವೆಂಬಂತೆ ಅನುಭವವಾಗುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ