ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಸೋಮವಾರ, ಮಾರ್ಚ್ 8, 2010

ಶ್ರೀ ಗುರುವಿನ ಸ್ಮರಿಸುತ್ತಾ.......

"ಹೆಸರು ಶಿವಶಾಂತ ಉಸಿರು ಮರಿಶಾಂತ" ವಿಷಯದಲ್ಲಿ ಉದಾಸೀನ, ವಿಶೇಷತೆಯಲ್ಲಿ ಭಕ್ತಾಧೀನ. ಅಂಗ-ಲಿಂಗಗಳ ಸಮರಸವ ಸಾಧಿಸಿದ ಲಿಂಗ ಸಂಗಿ, ಮನವ ಇಂದ್ರಿಯದಲ್ಲಿರಿಸದೇ ಬ್ರಹ್ಮ ರಂಧ್ರದಲ್ಲಿ ಕೇಂದ್ರೀಕರಿಸಿದ ಅಮನಸ್ಕ ಯೋಗಿ. ಅನುಷ್ಠಾನದಿಂದ ಸ್ವಾಧೀಷ್ಠಾನಾಧಿ ಚಕ್ರಗಳ ಸಕ್ರೀಯಗೊಳಿಸಿದ ಶಿವಯೋಗ ಚಕ್ರವರ್ತಿ ಅವರಿಗೆ ಭಕ್ತರೇ ನಿಜವಾದ ಆಸ್ತಿ. ಸಮಯ ಕಳೆದಿದ್ದು ಶಿವಪೂಜೆಯಲ್ಲಿ ಜಾಸ್ತಿ. ಕಲ್ಲಿಗೂ ಕಾಯಕ ಕಲಿಸಿ, ದೀನರಿಗೆ ದಾಸೋಹದಮೃತವ ಉಣಿಸಿ, ತ್ರಾಣ ಇರುವವರೆಗೂ ಪ್ರಾಣ ಹೋಗುವವರೆಗೂ ಗವಿಸಿದ್ಧನ ಸೇವೆ ಮಾಡಿ ಲೋಕಾಂತ-ಏಕಾಂತ ಸಾಧಿಸಿದ ಮಹಾಂತ ಗುರು ಶಿವಶಾಂತನ ೭ನೇ ಪುಣ್ಯಸ್ಮರಣೆ.
ಅಕ್ಷರ ಬರದ ಈ ನಾಡಿನಲ್ಲಿ ಸಾಕ್ಷರತೆಯ ದೀಪ ಬೆಳಗಿಸಿದ್ದು ಶ್ರೀ ಗವಿಮಠ. "ಎಡಗೈಯಲ್ಲಿ ಇಷ್ಟಲಿಂಗ, ಬಲಗೈಯಲ್ಲಿ ವಿದ್ಯಾರ್ಥಿಗಳ ಭವಿಷ್ಯ"ವನ್ನು ಇಟ್ಟುಕೊಂಡವರು ಗವಿಮಠದ ಎಲ್ಲ ಪೂಜ್ಯರು. ಶ್ರೀ ಮರಿಶಾಂತವೀರ ಶಿವಯೋಗಿಗಳಿಂದ ಪ್ರಾರಂಭಗೊಂಡ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಬೆಳೆದು ಇಂದು ಉತ್ತರ ಕರ್ನಾಟಕದ ಸಿದ್ಧಗಂಗೆ ಎಂದೇ ಭಕ್ತರ ಮನೆಮಾತಾಗಿದೆ. ೯೫೦ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಪಡೆದಿದ್ದಾರೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ವ ಭಕ್ತರ ಸಹಕಾರದಿಂದ ನೂತನವಾಗಿ ೨೦೦೦ ವಿದ್ಯಾರ್ಥಿಗಳ ಉಚಿತ ವಸತಿ ನಿಲಯದ ಪ್ರಥಮ ಹಂತದ ಕಟ್ಟಡ ಪೂರ್ಣಗೊಂಡಿದೆ. ದ್ವಿತೀಯ ಹಂತದ ಕಟ್ಟಡ ಪೂರ್ಣಗೊಳ್ಳುತ್ತಲಿದ್ದು ಈ ಸಂದರ್ಭದಲ್ಲಿ ೧೨ ಕೊಠಡಿಗಳ ಸಮೂಹ ಉದ್ಘಾಟನೆಗೊಳ್ಳುತ್ತಲಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣವನ್ನು ಗಮನದಲ್ಲಿರಿಸಿಕೊಂಡು ೫೦೦ ವಿದ್ಯಾರ್ಥಿನಿಯರಿಗಾಗಿ ಸುಸಜ್ಜಿತ ವಸತಿ ನಿಲಯ ಕಟ್ಟಡದ ಶಿಲಾನ್ಯಾಸ ನೆರವೇರಲಿದೆ.
ಕೊಪ್ಪಳ ಜಿಲ್ಲಾಡಳಿತ, ನಾಗರಿಕರು ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಾಡೋಜ ಶ್ರೀಮತಿ ಸಾಲುಮರದ ತಿಮ್ಮಕ್ಕನವರಿಂದ ಕೊಪ್ಪಳವನ್ನು ಮಾಲಿನ್ಯಮುಕ್ತ ಪರಿಸರವನ್ನಾಗಿಸಲು ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಲಿದೆ.
ಗುರುನಾಥರ ಪುಣ್ಯ ಸ್ಮರಣೆಗೆ ರಚನಾತ್ಮಕ ಸೇವಾ ಕಾರ್ಯಕ್ರಮಗಳೇ ಗುರುಚರಣದಲ್ಲಿ ಪುಷ್ಪಗಳಾಗಲಿ. ಅನ್ನ, ಅರಿವು, ಆರೋಗ್ಯ, ಆಧ್ಯಾತ್ಮ, ದಾಸೋಹಗಳಿಗೆ ತನು-ಮನ-ಧನ ತ್ರಿಕರ್ಣ ಪೂರ್ವಕ ಸೇವೆ ಸಲ್ಲಿಸಿ ಈ ಮಹಾತ್ಕಾರ್ಯದಲ್ಲಿ ಭಾಗಿಯಾಗೋಣ...

ಕಾಮೆಂಟ್‌ಗಳಿಲ್ಲ: