ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ
ಎನ್ನುವುದನ್ನೇ ತಮ್ಮ ಜೀವಾಳ ಮಾಡಿಕೊಂಡಿರುವ ಸಂಸ್ಥಾನ ಗವಿಮಠದ ೧೮ನೇ ಪೀಠಾಧಿಪತಿಗಳಾದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಪ್ರತಿ ವರ್ಷ ತಮ್ಮ ಗುರುವಿನ ಸ್ಮರಣೆ ಮಾಡುವುದೇ ವಿಭಿನ್ನ.
ತಮ್ಮ ಗುರುಗಳಾದ ಸಂಸ್ಥಾನ ಶ್ರೀ ಗವಿಮಠದ ೧೭ನೇ ಪೀಠಾಧಿಪತಿಗಳಾಗಿದ್ದ ಲಿಂ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯನ್ನು ಪ್ರತಿ ವರ್ಷ ಒಂದು ಸಾಧನೆಯ ಮೈಲಿಗಲ್ಲು ನೆಡುವ ಮೂಲಕ ಈಗಿನ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಚರಣೆ ಮಾಡುತ್ತಿದ್ದಾರೆ. ಇದು ಶ್ರೀ ಗವಿಮಠದ ಜೊತೆಗೆ ಈ ನಾಡಿನ ಪ್ರಗತಿಯೂ ಆಗುತ್ತಿರುವುದು ಸಂತಸದ ಸಂಗತಿ.
ಸಂಸ್ಥಾನ ಗವಿಮಠದ ೧೭ನೇ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ದಿನಾಂಕ ೨೬.೦೩.೨೦೦೩ರಂದು ಲಿಂಗೈಕ್ಯರಾದರು. ತಮ್ಮ ಅವಧಿಯಲ್ಲಿ ಅಪಾರ ಸಾಧನೆ ಮಾಡುವುದರ ಜೊತೆಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದ ಶಾಂತಮೂರ್ತಿಗಳು ಅವರು.
ಅವರು ಲಿಂಗೈಕ್ಯರಾದ ಬಳಿಕ ಪಟ್ಟಕ್ಕೆ ಬಂದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪ್ರತಿವರ್ಷ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಗುರುಗಳನ್ನು ಸ್ಮರಿಸುತ್ತಾರೆ.
ಪ್ರಥಮ ಪುಣ್ಯ ಸ್ಮರಣೆಯನ್ನು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕನಸಿನ ಆಯುರ್ವೇದಿಕ್ ಕಾಲೇಜಿನ ಕಟ್ಟಡವನ್ನು ಪೂರ್ಣಗೊಳಿಸುವ ಮೂಲಕ ಆಚರಿಸಿದರು. ಅದು ನಾಡಿನ ಹೆಸರಾಂತ ಆಯುರ್ವೇದಿಕ್ ಕಾಲೇಜುಗಳಲ್ಲಿ ಒಂದು ಎನ್ನುವಂತೆ ಇಂದು ಖ್ಯಾತಿ ಪಡೆದಿದೆ.
ದ್ವಿತೀಯ ಪುಣ್ಯ ಸ್ಮರಣೆಯನ್ನು ಸದ್ಭಾವನಾ ಯಾತ್ರೆ ಹಾಗೂ ಉಚಿತ ಆರೋಗ್ಯ ಚಿಕಿತ್ಸಾ ಶಿಭಿರಗಳನ್ನು ನಡೆಸುವುದರ ಜೊತೆಗೆ ವಿಶೇಷ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ತೃತೀಯ ಪುಣ್ಯ ಸ್ಮರಣೆಯನ್ನು ೨೦೦೦ ವಿದ್ಯಾರ್ಥಿಳ ಉಚಿತ ಪ್ರಸಾದ ನಿಲಯಕ್ಕೆ ಅಡಿಗಲ್ಲನ್ನು ಶ್ರೀ ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಗಳಿಂದ ಹಾಕಿಸಲಾತು. ಇದು ಸುಮಾರು ೨.೫ ಕೋಟಿ ರೂಗಳ ಅಂದಾಜು ವೆಚ್ಚದ ಯೋಜನೆಯಾಗಿದೆ.
ನಾಲ್ಕನೇ ಪುಣ್ಯ ಸ್ಮರಣೆಯನ್ನು ೨೦೦೦ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯದ ಮೊದಲ ಅಂತಸ್ತಿನ ಕಟ್ಟಡವನ್ನು ಉದ್ಘಾಟನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ಐದನೇ ಪುಣ್ಯ ಸ್ಮರಣೆಯನ್ನು ೨೦೦೦ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ ಕಟ್ಟಡದ ಮೊದಲ ಮಹಡಿ ಕಟ್ಟಡಕ್ಕೆ ಅಡಿಗಲ್ಲು ಹಾಕಲಾಯಿತು.
ಆರನೇ ಪುಣ್ಯಸ್ಮರಣೆಗೆ ಮಹಾದ್ವಾರಕ್ಕೆ ಅಡಿಗಲ್ಲು ಹಾಕಲಾತು. ಮತ್ತು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪಬ್ಲಿಕ್ ಸ್ಕೂಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾತು. ಈಗ ಕಾಮಗಾರಿ ಪ್ರಗತಿಯಲ್ಲಿದೆ.
ಈಗ ಏಳನೇ ಪುಣ್ಯ ಸ್ಮರಣೆಯ ಅಂಗವಾಗಿ ೫೦೦ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮ ಹಾಕಿಕೊಳ್ಳಳಾಗಿದೆ. ಅಲ್ಲದೇ ಬಿಸಿಲಿನ ಬೇಗೆಂದ ಬಳಲುತ್ತಿರುವ ಕೊಪ್ಪಳಕ್ಕೆ ನೆರಳು ಕ್ರಾಂತಿ ಮಾಡಲು ಸಹಸ್ರಾರು ಮರಗಳ ನೆಡುವ ಕಾರ್ಯಕ್ರಮ ಹಾಕಿಕೊಂಡಿದ್ದು ನಾಡೋಜ ಗೌರವಕ್ಕೆ ಪಾತ್ರವಾಗಿರುವ ಶ್ರೀಮತಿ ಸಾಲುಮರದ ತಿಮ್ಮಕ್ಕ ಅವರ ಮೂಲಕ ಹಸಿರು ಕ್ರಾಂತಿಗೆ ಚಾಲನೆ ಕೊಡಿಸಲಾಗುತ್ತದೆ. ಹೀಗೆ ಗುರು ಸ್ಮರಣೆಯನ್ನು ಪ್ರತಿ ಸಾರಿ ಒಂದು ಸಾಧನೆಯ ಮೈಲುಗಲ್ಲುಗಳನ್ನ ನೆಡುವ ಮೂಲಕ ಆಚರಣೆ ಮಾಡುವ ಸಂಪ್ರದಾಯ ಶ್ರೀ ಗವಿಮಠದ್ದಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ