ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಸೋಮವಾರ, ಮಾರ್ಚ್ 8, 2010

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಸಂಭ್ರಮ

ಪ್ರಾಚೀನ ಇತಿಹಾಸದಲ್ಲಿ ಕೊಪ್ಪಳ ಪ್ರದೇಶ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಕೊಪ್ಪಳ ನಗರ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಹೈದ್ರಾಬಾದ್-ಕರ್ನಾಟಕ ಭಾಗದ ಇತಿಹಾಸ ಪ್ರಸಿದ್ಧ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆ ಎಂದರೆ, ಈ ಭಾಗದ ಜನತೆಗೆ ಏನೋ ಒಂದು ಅಮಿತಾನಂದ, ಸಡಗರ, ಸಂಭ್ರಮ. ಕೊಪ್ಪಳ ನಗರದ ಬೆಟ್ಟದ ತಪ್ಪಲಿನಲ್ಲಿ ಕಂಗೊಳಿಸುವ ಸಂಸ್ಥಾನ ಶ್ರೀ ಗವಿಮಠ ಆಧ್ಯಾತ್ಮ, ಅನ್ನದಾಸೋಹ, ಜ್ಞಾನದಾಸೋಹ ಉಣಬಡಿಸುವ ಪುಣ್ಯ ಕ್ಷೇತ್ರವಾಗಿದೆ. ಪ್ರತಿ ವರ್ಷವೂ ನೂತನ ವರ್ಷಾರಂಭದ ಮೊದಲೆರಡು ಮಾಸದಲ್ಲೇ ಬರುವ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಸಡಗರವನ್ನು ಕಣ್ಣಾರೆ ಕಂಡು ಆನಂದಿಸಲು ಈ ಭಾಗದ ಸಣ್ಣ ಮಕ್ಕಳಿಂದ ಮೊದಲುಗೊಂಡು, ವಯಸ್ಕರವರೆಗೆ ಎಲ್ಲರೂ ತುದಿಗಾಲಲ್ಲಿ ನಿಲ್ಲುತ್ತಾರೆ.

ಇತಿಹಾಸ : ಚಾರಿತ್ರಿಕ ಸಂಪನ್ನತೆ ಹೊಂದಿರುವ ಕೊಪ್ಪಳ ಕುರಿತು ಕೊಪಣತೀರ್ಥ, ಆದಿತೀರ್ಥ, ಕೊಪಣಾಚಲ ಮುಂತಾದ ಹೆಸರುಗಳಿಂದ ಉಲ್ಲೇಖಿಸಿರುವುದು ಶಿಲಾಶಾಸನಗಳು ಹಾಗೂ ಸಾಹಿತ್ಯ ಗ್ರಂಥಗಳಿಂದ ತಿಳಿದುಬರುತ್ತದೆ. ಆದಿಗ್ರಂಥ ಕವಿರಾಜ ಮಾರ್ಗದಲ್ಲಿ ಮಹಾಕೊಪಣ ನಗರ ಮತ್ತು ತಿರುಳ್ಗನ್ನಡ ನಾಡು ಎಂಬ ಪ್ರಖ್ಯಾತಿ ಒಂದೆಡೆಯಾದರೆ, ಅಶೋಕ ಚಕ್ರವರ್ತಿಯ ಶಿಲಾ ಶಾಸನ ಕೊಪ್ಪಳದ ಇತಿಹಾಸ, ಧಾರ್ಮಿಕ- ಸಾಹಿತ್ಯಕ ವೈಭವ ಕೊಪ್ಪಳಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಕೊಪ್ಪಳ ಜೈನ ಧರ್ಮದ ಪ್ರಮುಖ ಕೇಂದ್ರವಾಗಿ ಜೈನಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ.
ಹನ್ನೊಂದನೇ ಶತಮಾನದಲ್ಲಿ ಕಾಶೀಚರವರ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪನೆಗೊಂಡ ಶ್ರೀ ಗವಿಮಠ, ಬರದ ನಾಡಿನಲ್ಲಿ ಅನ್ನದಾಸೋಹ ಮತ್ತು ಜ್ಞಾನ ದಾಸೋಹದ ಮೂಲಕ ಜಾತಿ ಮತ ಭೇದವಿಲ್ಲದೆ ಬಂದ ಭಕ್ತರನ್ನು ಹರಸಿದ ಪವಿತ್ರ ಸ್ಥಳವಾಗಿದೆ. ಗವಿಮಠದ ಹನ್ನೊಂದನೇ ಪೀಠಾಧಿಪತಿಗಳಾದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪರಮ ಪ್ರಸಾದ ಅಂಬಲಿಯನ್ನು ಉಣಿಸಿ ನವಾಬನ ಕುಷ್ಠರೋಗ ಗುಣಪಡಿಸಿ ಪವಾಡ ಮೆರೆದವರು ಎಂಬ ಪ್ರತೀತಿ ಇದೆ. ತಮ್ಮ ಪೂಝ್ಯ ಗುರುಗಳನ್ನು ಅಗಲಿ ಬದುಕುವ ಯಾತನೆ ಸಹಿಸಲಾರದೆ, ಗುರುಗಳಿಗಾಗಿ ಸಿದ್ದಪಡಿಸಿದ್ದ ಗದ್ದುಗೆಗೆ ತಾವೇ ಪ್ರವೇಶಿಸಿ ಸಜೀವ ಗದ್ದುಗೆಗೊಂಡರಂತೆ, ಅಂದಿನ ಆ ದಿನವನ್ನೇ ಶ್ರೀ ಗವಿಸಿದ್ದೇಶ್ವರ ಮಹಾ ಜಾತ್ರಾ ಮಹೋತ್ಸವವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ: